ಛತ್ತೀಸ್ ಗಢ - 
ಭಾರತದ ಒಂದು ರಾಜ್ಯ. ಭಾರತದ ಮಧ್ಯ ಭಾಗದಲ್ಲಿ ಪೂರ್ವಕ್ಕಿರುವ ಈ ರಾಜ್ಯವನ್ನು ಉತ್ತರಪ್ರದೇಶ, ಪಶ್ಚಿಮದಲ್ಲಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ, ದಕ್ಷಿಣದಲ್ಲಿ ಆಂಧ್ರಪ್ರದೇಶ ಪೂರ್ವದಲ್ಲಿ ಜಾರ್‍ಖಂಡ ಮತ್ತು ಒರಿಸ್ಸ ರಾಜ್ಯಗಳ ಸುತ್ತುವರೆದಿವೆ. 20,308 ಗ್ರಾಮಗಳಿಂದ, 97 ಪಟ್ಟಣಗಳಿಂದ ಕೂಡಿದ್ದು 16 ಜಿಲ್ಲೆಗಳನ್ನೊಳಗೊಂಡಿರುವ ಈ ರಾಜ್ಯದ ವಿಸ್ತೀರ್ಣ 1,36,034.ಚ.ಕಿವೀ ಜನಸಂಖ್ಯೆ 2,07,95,956.(2001). 

	ಕೃಷಿ : ಛತ್ತೀಸ್‍ಗಢ ರಾಜ್ಯದ ಒಟ್ಟು ಭೂಪ್ರದೇಶದಲ್ಲಿ ಸೇ. 45 ಭಾಗ ಅರಣ್ಯ ಪ್ರದೇಶ ಅಂದರೆ 6,247.ಸಾವಿರ ಹೆಕ್ಟೇರು ಪ್ರದೇಶ ಸಮೃದ್ಧವಾದ ಹಸಿರು ಅರಣ್ಯವನ್ನೊಳಗೊಂಡಿದೆ. ಕಾಡು ಪ್ರಾಣಿಗಳ ಸಂರಕ್ಷಣೆಗಾಗಿ 10 ವನ್ಯಮೃಗ ಧಾಮಗಳನ್ನು 3 ರಾಷ್ಟ್ರೀಯ ಉದ್ಯಾನವನಗಳನ್ನೂ ಹೊಂದಿದೆ. ರಾಜ್ಯದ ಸೇ. 80 ಭಾಗ ಜನರು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. 4799 ಸಾವಿರ ಹೆಕ್ಟೇರುಗಳಲ್ಲಿ ವಿವಿಧ ಬೆಳೆ ಬೆಳೆಯಲಾಗುತ್ತಿದೆ. ಬತ್ತ ಹೆಚ್ಚು ಬೆಳೆಯುವರು. ಗೋಧಿ, ನೆಲಗಡಲೆ, ಮುಸುಕಿನ ಜೋಳ ಮುಂತಾದವನ್ನು ಬೆಳೆಯುತ್ತಾರೆ. ಈ ರಾಜ್ಯದ ವಿಶಿಷ್ಟವೆಂದರೆ ಸುಮಾರು 21,000 ಬತ್ತದ ವಿವಿಧ ತಳಿಗಳನ್ನು ಸಂರಕ್ಷಿಸಿಟ್ಟಿರುವ ವಿಷಯ. 123 ಸಾವಿರ ಹೆಕ್ಟೇರುಗಳಲ್ಲಿ ತೋಟದ ಬೆಳೆಗಳನ್ನು, ವಿವಿಧ ಫಲ, ತರಕಾರಿಗಳನ್ನು ಬೆಳೆಯುತ್ತಾರೆ.

	ನೀರಾವರಿ ಮತ್ತು ವಿದ್ಯುತ್ : 2000 ನವಂಬರ್‍ನಲ್ಲಿ ಈ ರಾಜ್ಯದ 13.28 ಲಕ್ಷ ಹೆಕ್ಟೇರ್ ಭೂಪ್ರದೇಶ ನೀರಾವರಿಗೆ ಒಳಪಟ್ಟಿತ್ತು. ಇದಾದನಂತರ 2 ವರ್ಷ 9 ತಿಂಗಳ ಅವಧಿಯಲ್ಲಿ 1.25 ಲಕ್ಷ ಹೆಕ್ಟೇರ್ ಹೆಚ್ಚುವರಿ ಭೂಮಿಯನ್ನು ನೀರಾವರಿಗೆ ಒಳಪಡಿಸಲಾಯಿತು. ಪೈರಿ, ತಂದುಲ ಮತ್ತು ಕೊದರ್ ಈ ಹಿರಿಯ ನೀರಾವರಿಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಮಹಾನದಿ ಜಲಾಶಯಯೋಜನೆ, ಹಾಸ್‍ದೇವ್, ಸೊನ್‍ದುರ್ ಮತ್ತು ಜಾಂಕ್ ಈ ಹಿರಿಯ ನೀರಾವರಿ ಯೋಜನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 30 ಮಧ್ಯಮ, 2017 ಕಿರಿಯ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. 6 ಮಧ್ಯಮ 416 ಕಿರಿಯ ಯೋಜನೆಗಳನ್ನು ನಿರ್ಮಾಣದ ಹಂತದಲ್ಲಿವೆ.

	ರಾಜ್ಯದ ವಿದ್ಯುತ್ ಉತ್ಪಾದನೆ 1,381.05 ಮೆ.ವಾ ಇದ್ದು ಈಗ ವಿವಿಧ ಯೋಜನೆಯ ಮೂಲಕ ಶಕ್ತಿಮೂಲವನ್ನು ಹೆಚ್ಚುಗೊಳಿಸಲು ಪ್ರಯತ್ನ ನಡೆಯುತ್ತಿದೆ. ರಾಜ್ಯೋದಯಕ್ಕೆ ಮೊದಲು ಈ ಭಾಗದ ವಿದ್ಯುತ್ ವೆಚ್ಚ ಕೇವಲ 15 ಕೋಟಿಯಿತ್ತು. ಈಗ ವಾರ್ಷಿಕ ಈ ವೆಚ್ಚ 397 ಕೋಟಿಯಾಗಿದೆ. ರಾಜ್ಯದ ಶೇ. 93ರಷ್ಟು (19,720) ಇಲ್ಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಸಲಾಗಿದೆ.

	ಕೈಗಾರಿಕೆ : ಪ್ರಾಕೃತಿಕ ಸಂಪತ್ತು ಈ ರಾಜ್ಯದಲ್ಲಿ ಅರಣ್ಯ ರೂಪದಲ್ಲಿ ವಿವಿಧ ಅಮೂಲ್ಯ ಖನಿಜಗಳ ರೂಪದಲ್ಲಿ ಹೇರಳವಾಗಿದೆ. ಜಲಸಂಪತ್ತೂ ಸಾಕಾದಷ್ಟಿದೆ. ಭಾರತ ಸರ್ಕಾರದ ಅನೇಕ ಕೈಗಾರಿಕಾ ಘಟಕಗಳು ಇಲ್ಲಿವೆ. ಅವುಗಳಲ್ಲಿ ಭಿಲಾಯ್ ಉಕ್ಕು ಕಾರ್ಖಾನೆ, ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ ಸೌತ್ ಈಸ್ಟರನ್ ಕೋಲ್ ಫೀಲ್ಡ್ ಲಿಮಿಟೆಡ್, ಎ.ಸಿ.ಸಿ. ಸಿಮೆಂಟ್, ಗುಜರಾತ್ ಅಂಬುಜ, ಗ್ರಾಸಿಂ, ಎಲ್ ಆಂಡ್ ಟಿ, ಸಿಸಿಐ ಮತ್ತು ಫ್ರಾನ್ಸಿನ ಲ. ಫಾರ್ಜೆ ಇತ್ಯಾದಿ ಕಬ್ಬಿಣ, ಉಕ್ಕು, ಸಿಮೆಂಟ್ ಕಾರ್ಖಾನೆಗಳಿವೆ. ಇವುಗಳ ಜೊತೆಗೆ ಆಹಾರ ಸಂಸ್ಕರಣೆ, ಉಡುಪು, ರಸಾಯನಿಕ, ಪ್ಲಾಸ್ಟಿಕ್, ಕಟ್ಟಡ ಕಟ್ಟುವ ವಸ್ತುಗಳು, ಅರಣ್ಯೋತ್ಪಾದಕ ವಸ್ತುಗಳು ಇತ್ಯಾದಿಗಳ ತಯಾರಿಕೆಯೂ ಬರುಬರುತ್ತಾ ಪ್ರತಿವರ್ಷವೂ ಹೆಚ್ಚುತ್ತ ಬಂದಿವೆ. ರಾಯ್‍ಪುರ ಜಿಲ್ಲೆಯಲ್ಲಿ 3,112 ಹೆಕ್ಟೇರುಗಳ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿದ್ದು ಇಲ್ಲಿ 16,510. ಕೋಟಿ ರೂಪಾಯಿಗಳ ಬಂಡವಾಳ ಹೂಡಿರುವ 830 ವಿವಿಧ ಕೈಗಾರಿಕೆಗಳಿದ್ದು ಸುಮಾರು 25,000 ಮಂದಿಗೆ ಉದ್ಯೋಗ ದೊರಕಿಸಿಕೊಟ್ಟಿದೆ.

	ಛತ್ತೀಸ್‍ಗಢ ರಾಜ್ಯ ಆಧುನಿಕ ಜಗತ್ತಿನ ಕಂಪ್ಯೂಟರ್ ಬಳಕೆಯನ್ನೂ ಅದರ ವೈಜ್ಞಾನಿಕ ಉಪಯೋಗವನ್ನೂ ಮಾಡಿಕೊಂಡಿದೆ. ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲೇ ಚಿಪ್ಸ್, (ಛತ್ತೀಸ್‍ಗಢ ಇನ್‍ಫೊಟೆಕ್ ಮತ್ತು ಬಯೊಟೆಕ್ ಪ್ರೊಮೋಷನ್ ಸೊಸೈಟಿ) ಸಂಸ್ಥಾಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ರೂ. 50 ಕೋಟಿಯ ಯೋಜನೆಯನ್ನು ಜಾರಿಗೆ ತಂದಿದೆ. 

	ಖನಿಜಗಳು: ಕಲ್ಲಿದ್ದಿಲಿನ ಅಪಾರವಾದ ಶೇಖರಣೆ ಈ ರಾಜ್ಯದಲ್ಲಿದೆ. ಸುಣ್ಣಕಲ್ಲು, ಬಾಕ್ಸೈಟ್, ಡಾಲೊಮೈಟ್ ಮತ್ತು ಟಿನ್ ರಾಜ್ಯದ ಅನೇಕ ಕಡೆಸಿಗುತ್ತವೆ. ರಾಯ್‍ಪುರದ ವಜ್ರದ ನಿಕ್ಷೇಪದಿಂದ ಉತ್ತಮವಾದ ಹೆಚ್ಚು ಬೆಲೆಬಾಳುವ ವಜ್ರಗಳು ದೊರಕುತ್ತವೆಂದು ತಿಳಿದುಬಂದಿದೆ. 
 
	ಚಿನ್ನ, ಕ್ವಾಟ್ರ್ಜ, ಮೃದುಗಲ್ಲು, ಸ್ಟೇಟೈಟ್, ಫ್ಲೂರೈಟ್, ಕಾರಿಂಡಮ್, ಸೀಸ, ಲಿಪಿಡೊಲೈಟ್ ಮುಂತಾದ ಖನಿಜಗಳು ಸಿಗುತ್ತವೆ. ಈ ರಾಜ್ಯ ಒಂದರಲ್ಲೆ ಇಡೀ ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಟಿನ್ ಖನಿಜ ಇಲ್ಲಿ ದೊರೆಯುತ್ತದೆ. ಇಡೀ ಭಾರತದ ಸೇ. 20 ಭಾಗ ಉಕ್ಕು ಮತ್ತು ಸೀಮೆಂಟ್ ಇಲ್ಲಿ ತಯಾರಾಗುವುದು. 2002-2003 ನೆ ಸಾಲಿನಲ್ಲಿ ರೂ. 41. ಬಿಲಿಯನ್ ಬೆಲೆಯ ಖನಿಜಗಳನ್ನು ಉತ್ಪಾದಿಸಲಾಗಿತ್ತು.

	ಸಂಪರ್ಕ ಸಾಧನಗಳು: ರಾಜ್ಯದಲ್ಲಿ ಇರುವ ಒಟ್ಟು 35,388. 54 ಕಿ.ಮೀ ರಸ್ತೆ ಸಂಪರ್ಕದಲ್ಲಿ 1,827.30 ಕಿ.ಮೀ ರಾಷ್ಟ್ರೀಯ ಹೆದ್ದಾರಿ, 3611 ಕಿ.ಮೀ ರಾಜ್ಯ ಹೆದ್ದಾರಿ, 2118 ಕಿಮೀ ಜಿಲ್ಲಾ ರಸ್ತೆಗಳೂ 27,566 ಕಿ.ಮೀ ಗ್ರಾಮೀಣ ರಸ್ತೆಗಳು ಸೇರಿವೆ. ಉತ್ತರ ದಕ್ಷಿಣವಾಗಿ ಎರಡು ಮಾರ್ಗಗಳು ಪೂರ್ವಪಶ್ಚಿಮವಾಗಿ ನಾಲ್ಕು ನೇರ ಮಾರ್ಗಗಳ ಸಂಪರ್ಕ ಸುಗಮಕ್ಕೆ 2976. ಕಿ.ಮೀ ರಸ್ತೆಯನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲಿ 1053. ಕಿ.ಮೀ ರೈಲು ಮಾರ್ಗವಿದೆ. ಭಿಲಾಸ್‍ಪುರ ರೈಲು ವೃತ್ತ 2003. ಏಪ್ರಿಲ್ ಒಂದರಿಂದ ಕಾರ್ಯಗತವಾಗಿದೆ. ರಾಯ್‍ಪುರ, ಭಿಲಾಸ್‍ಪುರ, ದುರ್ಗ, ರಾಗನಂದಗಾಂವ್, ರಾಯ್‍ಗರ್ ಮತ್ತು ಕೆಲಾರ್ಬ ಮುಖ್ಯ ರೈಲು ನಿಲ್ದಾಣಗಳು. ರಾಜಧಾನಿ ರಾಯ್‍ಪುರನಿಂದ ದೆಹಲಿ, ನಾಗಪುರ, ಮುಂಬಯಿ, ಭುವನೇಶ್ವರ ಇಲ್ಲಿಗೆ ದಿನನಿತ್ಯ ವಿಮಾನ ಸಂಪರ್ಕವಿದೆ. ಬಿಲಾಸ್‍ಪುರ, ಭಿಲಾಯ್, ರಾಯ್‍ಗರ್, ಜಗದಲಪುರ, ಅಂಬಿಕಾಪುರ, ಕೊರ್ಬ, ಜಸ್‍ಪುರ್‍ನಗರ್ ಮತ್ತು ರಾಜನಂದಗಾಂವ್ ಇಲೆಲ್ಲಾ ವಿಮಾನ ನಿಲ್ದಾಣಗಳಿವೆ. 

	ಪ್ರವಾಸಿ ತಾಣಗಳು: ಛತ್ತೀಸ್‍ಗಢ್, ರಾಜ್ಯದಲ್ಲಿ ಆಚರಿಸುವ ಸಂಭ್ರಮದ ಹಬ್ಬಗಳೆಂದರೆ ಪೊಲ, ನವಕ್ಕೆತ, ದಸರ, ದೀಪಾವಳಿ, ಹೋಳಿಹಬ್ಬ ಮತ್ತು ಗೋವರ್ಧನ್ ಪೂಜಾ ಬಹು ಪ್ರಸಿದ್ಧವಾದವು. ಇವುಗಳ ಜೊತೆಗೆ ವಿದೇಶಿಯರನ್ನು ಆಕರ್ಷಿಸುವಂತಹ ಸುಂದರ ಪ್ರಾಕೃತಿಕ ತಾಣಗಳಿವೆ. ರಾಜ್ಯದಲ್ಲಿ ಅನೇಕ ಸ್ಥಳಗಳಲ್ಲಿ ಬಹು ಹಿಂದಿನ ಸುಂದರ ಸೌಧಗಳು, ಕೋಟೆ ಕಲ್ಲೆಗಳು ಇವೆ. ಆಕರ್ಷಕ ಕೆತ್ತನೆ ಕಸುರಿಯ ಕೆಲಸವುಳ್ಳ ದೇವಾಲಯಗಳು, ಬುದ್ದಧರ್ಮದ ಕ್ಷೇತ್ರಗಳು, ಅರಮನೆಗಳು, ಜಲಪಾತಗಳು, ಗುಹೆಗಳು, ಕಲ್ಲಿನ ಮೇಲಿನ ಪುರಾತನ ಚಿತ್ರಗಳು, ವಿವಿಧ ಅರಣ್ಯ ಮೃಗಗಳು, ಬೆಟ್ಟ ಕಣಿವೆಗಳು ಇಲ್ಲಿವೆ. ಬಸ್ತಾರ್ ಜಿಲ್ಲೆ ಪ್ರವಾಸಿಗರ ಆಕರ್ಷಕ ಕೇಂದ್ರ. 

	ಚಿತ್ರಕೋಟೆ ಜಲಪಾತ-ಇಲ್ಲಿ ಇಂದ್ರಾವತಿ ನದಿ 96 ಅಡಿ ಧುಮುಕುವುದು. ಕುದುರೆಲಾಳದ ಆಕಾರವಾಗಿರುವ ಈ ಜಲಪಾತವನ್ನು ನಯಾಗರ ಜಲಪಾತಕ್ಕೆ ಹೋಲಿಸುವುದುಂಟು. ಕಾಂಗರ್‍ನದಿ 100 ಅಡಿ ಧುಮುಕಿ, ತೀರ್ಥಗರ್ ಜಲಪಾತವನ್ನಂಟುಮಾಡಿದೆ. ಕಾಂಗರ್‍ಘಾಟ್ ರಾಷ್ಟ್ರೀಯ ಉದ್ಯಾನವನ, ಕೈಲಾಸ್ ಮತ್ತು ಕುತುಂಬಸರ್ ಗುಹೆಗಳು ಬಹು ಆಕರ್ಷಕ. ಭಿಲಾಸ್‍ಪುರ ಜಿಲ್ಲೆಯ ರತ್ನಪುರದಲ್ಲಿರುವ ಮಹಾಮಾಯ ದೇವಾಲಯ, ಕುತ್‍ಘಾಟ್ ಜಲಪಾತ, ಮಲ್ಲಾಹಾರ್‍ನ ದಿಂಡನೇಶ್ವರಿದೇವಿ ದೇವಾಲಯ, ಅಚ್ನಕ್ ಮಾರ್‍ನ ಮೃಗಧಾಮ, ರಾಯ್‍ಪುರದ ಬಳಿ ಇರುವ ಉದಂತಿ ಮೃಗಧಾಮ, ಕೊರ್ಬ ಜಿಲ್ಲೆಯ ಪಾಲಿ ಮತ್ತು ಕೆಂಡೈಜಲಪಾತಗಳು, ಜಾನಿಗಿರ್ ಚಂಪಾದ ಶಬರಿ ದೇವಾಲಯ, ವಿಷ್ಣು ದೇವಾಲಯ, ಶಿವರಿನಾರಾಯಣದ ನರನಾರಾಯಣ ದೇವಾಲಯ ಮುಂತಾದವು ಪ್ರಸಿದ್ಧವಾದವು. 

	ಈ ರಾಜ್ಯದ ಜಿಲ್ಲೆಗಳ ವಿವರ ಇಂತಿದೆ:
ಕ್ರಮಸಂಖ್ಯೆ
ಜಿಲ್ಲೆ
ವಿಸ್ತಾರ
(ಚ.ಕಿ.ಮೀ)
ಜನಸಂಖ್ಯೆ
(2001)
ಆಡಳಿತಕೇಂದ್ರ
ನಗರ

1.
ಬಸ್ತಾರ
17,016
13,02,253
ಜಗದಲಪುರ

2.
ಭಿಲಾಸ್‍ಪುರ
8,569
19,93,042
ಭಿಲಾಸ್‍ಪುರ

3.
ದುರ್ಗ
8,702
28,01,757
ದುರ್ಗ

4.
ರಾಯ್‍ಗರ್
6528
12,65,084
ರಾಯ್‍ಗರ್

5.
ರಾಯ್‍ಪುರ
13445
30,09,042
ರಾಯ್‍ಪುರ

6.
ರಾಜ್‍ನಂದಗಾಂವ್
8023
12,81,811
ರಾಜ್‍ನಂದಗಾಂವ್

7.
ಸುರ್ಗುಜ
16034
19,70,661
ಅಂಬಿಕಾಪುರ

8.
ಕಾರಿಯ
5978
5,85,455
ಬೈಕುಂಟಪುರ

9.
ಜಷಪುರ
6457
7,39,780
ಜಷಪುರ

10.
ಜಾನಿಗಿರ್‍ಚಂಪಾ
4467
13,16,140
ಜಾನಿಗಿರ್

11.
ಕೊರ್ಬ
5769
10,12,121
ಕೊರ್ಬ

12.
ಕಂಕರ್
6434
6,51,333
ಕಂಕರ್

13.
ದಂತೆವರ
15610
7,19,065
ದಂತೆವರ

14.
ಮಹಸಮುಂದ್
4963
8,60,176
ಮಹಸಮುಂದ್

15.
ಧಾಮತರಿ
4081
7,03,569
ಧಾಮತರಿ

16.
ಕಬೀರ್ ಧಾಮ್ (ಕವರ್ಧ)
3958
5,84,667
ಕಬೀರ್ ಧಾಮ್ (ಕವರ್ಧ)

	ಛತ್ತೀಸ್‍ಗಢ ರಾಜ್ಯದ ರಾಯ್‍ಪುರದಲ್ಲಿರುವ ಪಂಡಿತ್ ರವಿಶಂಕರ್ ಶುಕ್ಲಾ (ಸುಕ್ಲ) ವಿಶ್ವವಿದ್ಯಾನಿಲಯ, ಭಿಲಾಸ್‍ಪುರದ ಗುರುಘಾಸಿದಾಸ್ ವಿಶ್ವವಿದ್ಯಾನಿಲಯ, ಮತ್ತು ರಾಯ್‍ಪುರದಲ್ಲಿರುವ ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾನಿಲಯ ಪ್ರಸಿದ್ಧವಾದವು.

	ಛತ್ತೀಸ್‍ಗಢ ಈ ರಾಜ್ಯ ಪ್ರದೇಶ 1956ರಲ್ಲಿ ರೂಪುಗೊಂಡು ಮಧ್ಯಪ್ರದೇಶದಲ್ಲಿ ಸೇರಿತ್ತು. ಹಿಂದೆ ಈ ಪ್ರದೇಶವನ್ನು ದಕ್ಷಿಣ ಕೌಸಲ ರಾಜ್ಯವೆಂದು ಗುರುತಿಸಲಾಗುತಿತ್ತು. ಇದರ ಪ್ರಸ್ತಾಪ ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖಿತವಾಗಿದೆ. ಸುಮಾರು 6 ರಿಂದ 12ನೇ ಶತಮಾನದ ಮಧ್ಯದಲ್ಲಿ ಶರಭಪುರಿಯವರು, ಪಾಂಡುವಸಿ, ಸೊಮವಂಸಿ, ಕಲಚುರಿ, ಮತ್ತು ನಾಗವಂಸಿ ಈ ಪ್ರದೇಶವನ್ನು ಆಳಿದರು. ಕಳಚುರಿ ಮನೆತನದವರು ಛತ್ತೀಸ್‍ಗಢ್‍ವನ್ನು 980 ರಿಂದ 1791 ರವರೆಗೆ ಆಳಿದರು. ರತ್ನಪುರ ಹಿಂದೆ ರಾಜಧಾನಿಯಾಗಿತ್ತು. 1854ರಿಂದ ಬ್ರಿಟಿಷರ ಪ್ರವೇಶದಿಂದಾಗಿ ರಾಯ್‍ಪುರ ಪ್ರಾಮುಖ್ಯತೆ ಪಡೆಯಿತು. 1904ರಲ್ಲಿ ಬಂಗಾಳದ ಸರ್ಗುಜದ ಪ್ರದೇಶವನ್ನು ಛತ್ತೀಸ್‍ಗಢಕ್ಕೆ ಸೇರಿಸಲಾಯಿತು. 1946 ರಲ್ಲಿ `ಛತ್ತೀಸ್‍ಗಢ ಶೋಷಣಾವಿರೋದಿ ಸಂಘ, ಠಾಕೂರ್ ಪ್ಯಾರೆಲಾಲ್ ಸಿಂಗ್ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಜೊತೆಗೆ ಈ ಪ್ರದೇಶದ ರಾಜರು ತಮ್ಮ ಹಿತರಕ್ಷಣೆಗಾಗಿ "ರಿಯಾಸತಿ ಆಂಧೋಲನ" ಪ್ರಾರಂಭಿಸಿದರು. 1992ರಲ್ಲಿ ಹರಿಠಾಕೂರ್ "ಛತ್ತೀಸ್‍ಗಢ ರಾಜ್ಯ ನಿರ್ಮಾಣ ಸರ್ವದಳೀಯ ಮಂಚ" ಸ್ಥಾಪಿಸಿ ಸಂಘಟನೆಯನ್ನು ತಂದರು. ಶಂಕರ್ ಗುಹಾ ನಿಯೋಗಿ 'ಛತ್ತೀಸ್‍ಗಢ ಮುಕ್ತಿ ಮೋರ್ಚ ಸ್ಥಾಪಿಸಿ ಪ್ರತ್ಯೇಕ ರಾಜ್ಯದ ಹೋರಾಟ ಬಲಪಡಿಸಿದರು. ಆದರೆ 1991ರಲ್ಲಿ ಅವರನ್ನು ಕೊಲ್ಲಲಾಯಿತು. ಮುಂದೆ 2000, ನವೆಂಬರ್ 1 ರಂದು ಇಂದಿನ ಛತ್ತೀಸ್‍ಗಢ ರಾಜ್ಯದ ಉದಯವಾಯಿತು. ಭಾರತದ 26ನೇ ರಾಜ್ಯವಾಗಿ ಪ್ರಗತಿಯತ್ತ ಸಾಗುತ್ತಿದೆ. 									(ಬಿ.ಶಾಮಸುಂದರ; ಪಿ.ಜಿ.ಡಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ